Thursday, 22 November 2018

ಕನಕದಾಸರ ಜಯಂತಿ

ಎಲ್ಲರಿಗೂ ಶುಭೋದಯ.

*"ಶ್ರೀ ಕವಿಸಾರ್ವಭೌಮ ಕನಕದಾಸರ ವೈಭವ*

*ಇಂದು‌ ಶ್ರೀ ಕನಕದಾಸರ ಜಯಂತಿ*

*ಶ್ರೀ ಕನಕದಾಸರ ಸಂಕ್ಷಿಪ್ತ ಮಾಹಿತಿ*

ಹೆಸರು : ಶ್ರೀ ತಿಮ್ಮಪ್ಪ

ತಂದೆ : ಬೀರಪ್ಪ

ತಾಯಿ : ಸಾಧ್ವೀ ಬಚ್ಚಮ್ಮ

ಜನ್ಮ ಸ್ಥಳ : ಬಾಡ ( ಜಿಲ್ಲೆ : ಧಾರವಾಡ )

ಕಾಲ : ಕ್ರಿ. ಶ. 1508 - 1606

ಸ್ವರೂಪೋದ್ಧಾರಕ ಗುರುಗಳು : ಶ್ರೀ ವ್ಯಾಸರಾಜ ಗುರುಸಾರ್ವಭೌಮರು

ಶ್ರೀ ಕನಕದಾಸರು ಧಾರವಾಡ ಜಿಲ್ಲೆಯ ಬಾಡದವರು. ಇವರ ಮೊದಲಿನ ಹೆಸರು ಶ್ರೀ ಬೀರಪ್ಪ. ಬೇಟೆ - ಬಿಲ್ಲಾಳುತನ - ಕತ್ತಿವರಸೆ - ಕಾಳಗಗಳಲ್ಲಿ ನುರಿತ " ಶ್ರೀ ಬೀರಪ್ಪ " ರಿಗೆ ನಿಧಿಯೊಂದು ದೊರಕಿದ್ದರಿಂದ " ಶ್ರೀ ಕನಕನಾಯಕ " ರಾದರು.

ಐಶ್ವರ್ಯ ಬಂದಾಗ ಶ್ರೀ ಕನಕನಾಯಕರು ದೇವರನ್ನು ಮರೆಯಲಿಲ್ಲ . ತಮ್ಮ ಗ್ರಾಮದ ಜೊತೆ " ಕಾಗಿನೆಲೆ " ಯಲ್ಲಿ ದೊಡ್ಡ ದೇವಸ್ಥಾನವನ್ನು ಕಟ್ಟಿಸಿ ಅಲ್ಲಿ ಶ್ರೀ ಕೇಶವ ದೇವರನ್ನು ಪ್ರತಿಷ್ಠಾಪಿಸಿದರು. ತಿರುಪತಿಯ ದೇವಸ್ಥಾನದಂತೆ ಎಲ್ಲಾ ವಿಧವಾದ ಪೂಜಾ ಉತ್ಸವಾದಿಗಳ ವ್ಯವಸ್ಥೆಯನ್ನು ಮಾಡಿದರು.

ಒಮ್ಮೆ ಪರಚಕ್ರದಾಳಿಗೆ ತುತ್ತಾದಾಗ ಅವರಿಗೆ ವೈರಾಗ್ಯ ಉದಯವಾಯಿತು. ಆಗಲೇ ತಮ್ಮ ಢಣಾಯಾಕ ಪದವಿ, ಅಧಿಕಾರ, ಐಶ್ವರ್ಯಾದಿಗಳಿಗೆಲ್ಲಾ ತಿಲಾಂಜಲಿಯಿತ್ತು ಹರಿದಾಸರಾದರು. ಕಾಲಿಗೆ ಗೆಜ್ಜೆ ಕಟ್ಟಿ, ಕೈಯಲ್ಲಿ ತಂಬೂರಿ - ಚಿಟಿಕೆಗಳನ್ನು ಹಿಡಿದು ತಮ್ಮ ಕುಲ ಸ್ವಾಮಿಯಾದ ಕಾಗಿನೆಲೆಯ ಶ್ರೀ ಆದಿಕೇಶವನನ್ನು ಕೊಂಡಾಡುತ್ತಾ ವಿಜಯನಗರಕ್ಕೆ ಶ್ರೀ ವ್ಯಾಸರಾಜ ಗುರುಸಾರ್ವಭೌಮರಿದ್ದಲ್ಲಿಗೆ ಬಂದರು!

ಶ್ರೀ ವ್ಯಾಸರಾಜ ಗುರುಸಾರ್ವಭೌಮರಿಂದ ದ್ವೈತ ಸಿದ್ಧಾಂತದ ದಿವ್ಯ ಜ್ಞಾನವನ್ನು ಪಡೆದು ಹರಿಭಕ್ತಿಯ ಹರಿಕಾರರಾಗಿ ಶ್ರೀ ಕನಕದಾಸರು ಅನೇಕ ಪದ - ಪದ್ಯ - ಷಟ್ಪದಿ - ಸಾಂಗತ್ಯ ಕಾವ್ಯಗಳನ್ನು ಮಧುರ ಮನೋಹರವಾದ ಶೈಲಿಯಲ್ಲಿ ಕವನಿಸಿದ್ದಾರೆ.



ಶ್ರೀ ಕನಕದಾಸರು...



ಸಮಕಾಲೀನ ಯತಿಗಳು : ಶ್ರೀ ವಿಜಯೀ೦ದ್ರರು, ಶ್ರೀ ವಾದಿರಾಜರು, ಶ್ರೀ ತಾತಾಚಾರ್ಯರು

ಸಮಕಾಲೀನ ಹರಿದಾಸರು : ಶ್ರೀ ಪುರಂದರದಾಸರು, ಶ್ರೀ ವೈಕುಂಠದಾಸರು

ಅಂಕಿತ : ಶ್ರೀ ಪ್ರಸಾದಾಂಕಿತ " ಆದಿಕೇಶವ "

"  ಶ್ರೀ ಕನಕದಾಸರ ಕಾವ್ಯ ವೈಭವ "

1. ಹರಿಭಕ್ತಿಸಾರ
2. ಮೋಹನ ತರಂಗಿಣೀ
3. ರಾಮಧಾನ್ಯ ಚರಿತ್ರೆ
4. ನೃಸಿಂಹ ಸ್ತವ
5. ನಳ ಚರಿತ್ರೆ

ಮೊದಲಾದ ಖಂಡ ಕಾವ್ಯಗಳು ನವರಸಗಳ ಅಖಂಡ ಕಾರಂಜಿಗಳಂತೆ ರಸಿಕರಿಗೆ ಆನಂದವನ್ನುಂಟು ಮಾಡುತ್ತಲಿವೆ. ಇವುಗಳಲ್ಲಿ ೧೬ನೇ ಶತಮಾನದ ಕನ್ನಡ ಸಾಹಿತ್ಯದ ಸೊಬಗು - ಸೊಗಸು - ಛಂದೋ ವೈವಿಧ್ಯ ಬಂಧನ ಬಿಗುವು - ಮಾತಿನ ಮೆರಗು - ಉಕ್ತಿ ವೈಚಿತ್ರ್ಯ - ಭಾವಾವಿಷ್ಕರಣದ ನಯ, ನೈಪುಣಿ ಮುಂತಾದ ಗುಣಗಳು ಸ್ಫುಟವಾಗಿ, ಹೇರಳವಾಗಿ ಕಂಡು ಬರುತ್ತವೆ.

ಶ್ರೀ ಕನಕದಾಸರ ಹರಿಭಕ್ತಿಸಾರವು

೧೧೦ ಪದ್ಯಗಳ ಪುಟ್ಟ ಪ್ರಬಂಧವಾಗಿದೆ. ಇದರಲ್ಲಿ ಭಕ್ತ ಹೃದಯದಿಂದ ಉಕ್ಕಿ ಹರಿದ ಆರ್ತ ಭಾವದ ಕೊರೆತ - ಮೊರೆತಗಳು ಭಾಮಿನೀ ಷಟ್ಪದಿಯ ಮಂಜುಳ ಪ್ರವಾಹದಲ್ಲಿ ಹೊಮ್ಮಿ ಹರಿದಿದೆ. ಇದರಲ್ಲಿ ನಿರೂಪಿಸಿದ ತತ್ತ್ವಗಳು ಸಿದ್ಧಾಂತಿಕ ಸತ್ವವನ್ನೂ; ಸಾಹಿತ್ಯಕ ಮಹತ್ವವನ್ನೂ ಪಡೆದ ಮಿಶ್ರ ಮಾಧುರಿಯಿಂದ ರಸ ಮೊರೆತಗಳಂತೆ ಭಕ್ತರಿಗೆ ಹೃದ್ಯ ವೆನಿಸಿದೆ.

" ರಾಮಧಾನ್ಯ ಚರಿತ್ರೆ " 

ಶ್ರೀ ಕನಕದಾಸರ ಕಲ್ಪನಾ ಕೌಶಲಕ್ಕೆ ಕನ್ನಡಿ ಹಿಡಿಯುತ್ತದೆ. ಇದರಲ್ಲಿ ರಾಗಿ ಮತ್ತು ಭತ್ತಗಳ ನಡುವೆ ವಾದವನ್ನು ಏರ್ಪಡಿಸಿ ಅದರಲ್ಲಿ ಭಗವಂತನು ಬಡವರ ಪಕ್ಷಪಾತಿ - ಭಕ್ತವತ್ಸಲನೆಂಬುದನ್ನು ಮನೋಹರವಾಗಿ ತೋರಿಸಿ ಕೊಟ್ಟಿದ್ದಾರೆ. ಈ ವಾದವು ಬಡವರ ಅನ್ನವಾದ ರಾಗಿಯು ಗೆದ್ದುದ್ದರಿಂದ ಅದಕ್ಕೆ ರಾಮನು ತನ್ನ ರಾಘವ ಎಂಬ ಹೆಸರನ್ನು ಇಟ್ಟನು ಎಂಬ ಶ್ರೀ ಕನಕದಾಸರ ಕಲ್ಪನೆ ಅವರ ಭಾಗವತ ಮನೋಭಾವವನ್ನೂ, ಜನಾನುರಾಗವನ್ನೂ ಪ್ರಕಟಗೊಳಿಸುತ್ತದೆ.

ಶ್ರೀ ಕನಕದಾಸರು " ನಳ ಚರಿತ್ರೆ " 

ಯಲ್ಲಿ ಪುರಾಣ ಪ್ರಸಿದ್ಧವಾದ ನಳ ದಮಯಂತಿಯರ ಜೀವನದ ಹಂದರದ ಸುಂದರವಾದ ಕಾವ್ಯದ ಬಳ್ಳಿಯನ್ನು ಹಬ್ಬಿಸಿದ್ದಾರೆ. ಇಲ್ಲಿಯ ಮಧುರ, ಕೋಮಲವಾದ ಕಾವ್ಯ ಶೈಲಿಯ ಕುಶಲ ಕೈಗಾರಿಕೆಯನ್ನು ಕಂಡಾಗ " ಶ್ರೀ ಕುಮಾರವ್ಯಾಸ ಮತ್ತು ಶ್ರೀ ಲಕ್ಷ್ಮೀಶ " ರು ಕೂಡಿಯೇ ಈ ಕಾವ್ಯವನ್ನು ರಚಿಸಿದ್ದಾರೆಯೋ ಏನೋ ಎನ್ನಿಸುವಂತಿದೆ.

" ಮೋಹನ ತರಂಗಿಣೀ " 

ಯು ಉಷಾ ಸ್ವಯಂವರದ ಕಥೆಯನ್ನು ಶುದ್ಧ ಛಂದಸ್ಸಾದ ಸಾಂಗತ್ಯದಲ್ಲಿ ಸಂಗಮನಗೊಳಿಸಿದ ಹೃದಯಂಗಮ ಕಾವ್ಯವಾಗಿದೆ. ಸಂಸ್ಕೃತ ಮಹಾ ಕಾವ್ಯಗಳ ವರ್ಣನಾ ಪ್ರೌಢಿಮೆ, ಸಮಸಾಮಯಿಕ ಕಾವ್ಯ ಪ್ರಬಂಧಗಳ ನಿರೂಪಣದ ಚಾರಿಮೆ, ದ್ವೈತ ತತ್ತ್ವ ನಿಷ್ಠವಾದ, ಭಕ್ತಿಯ ಮಧುರಿಮೆ ಇವು ಮೂರೂ ಶ್ರೀ ಕನಕದಾಸರ ರಸಾಳ ಶೈಲಿಯಲ್ಲಿ ಮುಪ್ಪುರಿಗೊಂಡು ಮಹಾ ಕಾವ್ಯದ ಸರಸ ಅಭಿವ್ಯಕ್ತಿಗೆ ಈ ಕೃತಿಯಲ್ಲಿ ಶಕ್ತಿಯನ್ನು ಒದಗಿಸಿದೆ. ಇದಲ್ಲದೆ ಶ್ರೀ ಕನಕದಾಸರ ಕೃತಿಗಳಲ್ಲಿ ಭಕ್ತಿ ತರಂಗಿಣಿಯು ಸಹೃದಯರ ಅಂತರಂಗ ಗಂಗೆಯಾಗಿ ಭಾವ ಸಂಭ್ರಮದಿಂದ ಪ್ರವಹಿಸಿದೆ!!

ಪದ್ಯ ಪದ್ಧತಿಯಲ್ಲಿ ಶ್ರೀ ಕನಕದಾಸರ ಕಲ್ಪನಾ ಕೌಶಲವು ಬಾಣಗಳವಾಗಿ ಭೂಮಾನು ಭೂತಿಯಿಂದ ಮಹತೋ ಮಹೀಯವಾಗಿ ವಿಜೃಂಭಿಸುತ್ತವೆ.

ಶ್ರೀ ಕನಕದಾಸರು ತಮ್ಮ ನುಡಿಗನ್ನಡಿಯಲ್ಲಿ ಜನ ಜೀವನದ ಚಿತ್ರವನ್ನೂ; ಸಮಾಜದ ಕುಂದು ಕೊರತೆಗಳನ್ನೂ ಬಿಚ್ಚು ಮಾತಿನಲ್ಲಿ; ಒಮ್ಮೊಮ್ಮೆ ಚುಚ್ಚು ಮಾತಿನಲ್ಲಿ; ಮತ್ತೊಮ್ಮೆ ಅಚ್ಛರಿಯ ನುಡಿಗಳಲ್ಲಿ ಬಿಡಿಸಿ ಹೇಳಿದ್ದಾರೆ.ಅಲ್ಲಲ್ಲಿ ಕಿಡಿ ಕಿಡಿಯಾಗಿ ಸಿಡಿಸುವ ಬಿಡಿ ನುಡಿಗಳಲ್ಲಿ ದೀನ - ದಲಿತರ ಬಗೆಗೂ; ಸಮಾಜದ ಮೂಢ ರೂಢಿಗಳ ಬಗೆಗೂ ಶ್ರೀ ಕನಕದಾಸರ ಕಳವಳಿ - ಕಳವಳಗಳು ಚೆನ್ನಾಗಿ ವ್ಯಕ್ತವಾಗಿರುತ್ತವೆ.

ಶ್ರೀ ಕನಕದಾಸರು ದೇಶೀಯ ತಿರುಳುಗನ್ನಡದಲ್ಲಿ ತತ್ತ್ವ ನಿಷ್ಠೆ; ಭಕ್ತಿ ನಿಷ್ಠೆ; ಕಾವ್ಯ ಪ್ರಜ್ಞೆಗಳು ಉಲ್ಲಾಸದ ಅರಳುಗಳಾಗಿ; ಸಂಸ್ಕೃತ ಸಾಹಿತ್ಯದ ಸೊಬಗಿನ ಎರಕದಲ್ಲಿ ಸೊಗಯಿಸುತ್ತದೆ. ಹೀಗೆ ಸಾಮಾನ್ಯವಾಗಿ ಸರಳ ಸುಂದರವಾಗಿ ಹರಿಯುವ ಶ್ರೀ ಕನಕದಾಸರ ಕವಿತಾ ಝರಿ ಒಮ್ಮೊಮ್ಮೆ ಎಂಥೆಂಥಾ ಪಂಡಿತರಿಗೂ ಅರ್ಥವಾಗದ ಗೂಢಗುಂಭವಾಗಿ ಪಂಡಿತರ ಅಹಂಭಾವಕ್ಕೆ ಆಹ್ವಾನವೀಯ್ಯುತ್ತದೆ. ಇಂಥಾ ಗೂಢಾರ್ಥದ ಕೃತಿಗಳು " ಕನಕನ ಮುಂಡಿಗೇ " ಎಂದು ಹೆಸರಾಗಿರುತ್ತವೆ. ಬೆಡಗಿನ ವಚನಗಳಂತೆ ಶ್ರೀ ಕನಕದಾಸರ ಮುಂಡಿಗೆಗಳು ಸಾಮಾನ್ಯ ಮಟ್ಟದ ಜನತೆಗೆ ಒಗಟುಗಳಂತೆ ಕಬ್ಬಿಣದ ಕಡಲೆಗಳಾಗಿದ್ದರೂ ಅರ್ಥ ಮಾಡಿಕೊಂಡು ಓದುವ ವಿದ್ವಾಂಸರಿಗೆ ಬಹು ರಮ್ಯವೆನಿಸುತ್ತದೆ!!

ಶ್ರೀ ಕನಕದಾಸರ ಮಾತುಗಳಲ್ಲಿ...

ಮಾರ್ಮಿಕವಾದ ದೃಷ್ಟಾಂತಗಳಿಂದ, ಉಪಮೆ - ಉತ್ಪ್ರೇಕ್ಷಾದಿ ಅಲಂಕಾರಗಳಿಂದ; ಸಂಸಾರದಲ್ಲಿ ವೈರಾಗ್ಯ್ವನ್ನು ಹುಟ್ಟಿಸಿ ಮುಕ್ತಿಗೂ - ಅದಕ್ಕೆ ಸಾಧನವಾದ ಭಕ್ತಿಗೂ ಜನರನ್ನು ಅಭಿಮುಖಗೈಯುವ ಯುಕ್ತಿಯಿದೆ.

" ಉಪಸಂಹಾರ "

ವಿಜಯನಗರ ಕಾಲದ ಕನ್ನಡ ನೆಲವು ಅತ್ಯಂತ ಹೆಚ್ಚಿನ ಮಟ್ಟದಲ್ಲಿ ಸಾಂಸ್ಕೃತಿಕ, ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ ಕ್ಷೇತ್ರದಲ್ಲಿ ಘನತೆಯನ್ನು ಪಡೆಯಿತು.

ಶ್ರೀ ವ್ಯಾಸರಾಜರು ಹಾಗೂ ಅವರ ಶಿಷ್ಯ ಪರಂಪರೆಯಲ್ಲಿ ಶ್ರೀ ಕನಕ, ಶ್ರೀ ಪುರಂದರದಾಸರುಗಳು ಜನ ಹಿತ ಪರವಾಗಿ ಶ್ರೀ ಕೃಷ್ಣದೇವರಾಯನಿಗೆ ಮಾರ್ಗದರ್ಶನ ಮಾಡಿ, ಜನ ಹಿತವನ್ನು ಕಾಪಾಡಿ ಜನತೆಯನ್ನು ಸನ್ಮಾರ್ಗಕ್ಕೆ ಹಚ್ಚುವಲ್ಲಿ ಇವರ ಕೊಡುಗೆ ಅತ್ಯದ್ಭುತ.

ಶ್ರೀ ಕನಕದಾಸರು ಕ್ರಿ ಶ 1508 - 1606 ರ ಮಧ್ಯ ಭಾಗದಲ್ಲಿ ಬಾಳಿ ಬದುಕಿದರು. ಬದುಕಿನ ಎಲ್ಲಾ ಮಗ್ಗಲುಗಳನ್ನು ನೋಡಿದವರು. ಪ್ರಪಂಚವನ್ನು ವಿಸ್ತಾರವಾಗಿ ಕಂಡವರು. ಜೀವನದ ನೈಜ ಸ್ವರೂಪವನ್ನು ಅರ್ಥ ಮಾಡಿಕೊಂಡು ಸಂಪತ್ತನ್ನೆಲ್ಲಾ ದಾನ ಮಾಡಿ, ಹರಿದಾಸರಾಗಿ ಜೀವನದ ಗುಟ್ಟನ್ನು ಬಿಚ್ಚಿ, ಸದ್ಗತಿ ಪಡೆಯಲು ಸಾಧನಾ ಕ್ರಮವನ್ನು ಬೀದಿ - ಬೀದಿ, ಕೇರಿ - ಕೇರಿ, ಮನೆ ಗುಡಿಸಲುಗಳೆನ್ನದೆ ಎಲ್ಲೆಡೆಯೂ ಅಲೆದಾಡಿ, ಹಾಡಿ ಪಾಡಿ ತಿಳಿ ಹೇಳಿ ಕುಣಿ ಕುಣಿದಾಡಿದರು.

ಶ್ರೀ ಕನಕದಾಸರೊಂದು ಸಂಚಾರೀ ವಿಶ್ವ ವಿದ್ಯಾಲಯವಾಗಿ ಸಾಮಾನ್ಯರ ಬದುಕಿನಲ್ಲಿ ವಿಶ್ವಾಸವನ್ನು ಮೂಡಿಸಿದ ಮಹಾನುಭಾವರು. ಇಂಥಹಾ ಮಹಾನುಭಾವರ ಪರಮಾನುಗ್ರವೇ ನಮಗೆ ಶ್ರೀರಕ್ಷೆ.

ನಿರ್ಮಾಣ ಮೋಹ ವರ್ಜಿತ ಸಂಗ ದೋಷಾ:
ಆಧ್ಯಾತ್ಮನಿತ್ಯಾವಿನಿವೃತ್ತಕಾಮಾ: ।
ದ್ವಂದ್ವೈರ್ವಿಮುಕ್ತಾ ಸುಖ ದುಃಖ ಸಂಜ್ನೈ:
ಗಚ್ಛ೦ತ್ಯಮೂಢಾ: ಪದಮವ್ಯಯಂತತ್ ।। ೧೫-೫ ।।

ಎಂದು ಹೇಳಿ ತಿರುಮಲೆಯ ಚೆಲುವನಾದ ಶ್ರೀ ಶ್ರೀನಿವಾಸನ ಪಾದಾರವಿಂದದಲ್ಲಿ ಅದೃಶ್ಯರಾದರು.

ಹೆಚ್ಚಿನ ಮಾಹಿತಿ ಕನಕದಾಸರು



No comments:

Post a Comment

ಕನ್ನಡ SSLC SCORING PACKAGE

  ಕೇವಲ 35 ಪುಟದಲ್ಲಿ ಕನ್ನಡ SCORING PACKAGE 2022-23