Tuesday, 20 November 2018

ಸೋಮೇಶ್ವರ ಶತಕ

ಸೋಮೇಶ್ವರ ಶತಕ ಪದ್ಯಭಾಗದ (ಭಾವಾರ್ಥ)

ಹಿತವಂ ತೋರುವನಾತ್ಮಬಂಧು ಪೊರೆವಾತಂ ತಂದೆ ಸದ್ಧರ್ಮದಾ |
ಸತಿಯೇ ಸರ್ವಕೆ ಸಾಧನಂ ಕಲಿಸಿದಾತಂ ವರ್ಣಮಾತ್ರಂ ಗುರು ||
ಶ್ರುತಿಮಾರ್ಗಂ ಬಿಡದಾತ ಸುವ್ರತಿ ಮಹಾ ಸದ್ವಿದ್ಯೆಯೇ ಪುಣ್ಯದಂ |
ಸುತನೇ ಸದ್ಗತಿದಾತನೈ ಹರಹರಾ ಶ್ರೀಚೆನ್ನಸೋಮೇಶ್ವರಾ || ೧ ||

ಭಾವಾರ್ಥ:- ಯಾರು ನಮ್ಮ ಹಿತವನ್ನು ಬಯಸುವನೋ ಅವನೇ ಆತ್ಮಬಂಧು(ನೆಂಟ). ಸಾಕಿ, ಸಲಹಿ  ಕಾಪಾಡುವವನೇ ತಂದೆ. ಧರ್ಮ ಮಾರ್ಗದಿಂದ ನಡೆದುಕೊಂಡು ಹೋಗುವ ಹೆಂಡತಿಯೇ ನಮ್ಮ ಎಲ್ಲಾ ಸುಖಕ್ಕೂ ಕಾರಣ, ಒಂದಕ್ಷವನ್ನು ಕಲಿಸಿದವನಾದರೂ ಅವನೂ ಗುರುವೇ. ವೇದಗಳನ್ನು ಬಿಡದೆ ಪಠಿಸುತ್ತಾ ಪಾಲನೆ ಮಾಡುವವನೇ ಮುನಿ. ಒಳ್ಳೆಯ ವಿದ್ಯೆಯೇ ಪುಣ್ಯಸಂಪಾದನೆಗೆ ದಾರಿ. ಒಳ್ಳೆಯ ಮಗನೇ ಸದ್ಗತಿಯನ್ನು ತಂದುಕೊಡುತ್ತಾನೆ ಎಂದು ಸೋಮನಾಥ ಹೇಳಿದ್ದಾನೆ.

ಪ್ರಜೆಯಂ ಪಾಲಿಸಬಲ್ಲೊಡಾತನರಸಂ ಕೈಯಾಸೆಯಂ 
ನಿಜ ಮಂತ್ರೀಶ್ವರ ತಂದೆ ತಾಯ ಸಲಹಲ್ ಬಲ್ಲಾತನೇ ಧಾರ್ಮಿಕಂ ||
ಭಜಕಂ ದೈವದ ಭಕ್ತಿಯುಳ್ಳೊಡೆ ಭಟಂ ನಿರ್ಭೀತ ತಾನಾದವಂ |
ದ್ವಿಜನಾಚಾರತೆಯುಳ್ಳವಂ ಹರಹರಾ ಶ್ರೀಚೆನ್ನಸೋಮೇಶ್ವರಾ || ೨ ||

ಭಾವಾರ್ಥ:- ಪ್ರಜೆಗಳನ್ನು ಪಾಲಿಸಬಲ್ಲವನೆ ನಿಜವಾದ ಅರಸ. ಲಂಚ ಆಮಿಷಗಳನ್ನು ಬಯಸದವನೇ ನಿಜವಾಗಿ ಒಳ್ಳೆಯ ಮಂತ್ರಿ. ತಂದೆ-ತಾಯಿಯನ್ನು ಸಲಹುವವನೇ ಧರ್ಮವಂತ, ಭಕ್ತಿಯಿಂದ ಪೂಜಿಸುವವನೇ ನಿಜಕವಾದ ಭಕ್ತ. ಧೈರ್ಯವಂತನೇ ನಿಜವಾದ ಭಟ. ಒಳ್ಳೆಯ ಆಚಾರವನ್ನು ಹೊಂದಿರುವವನೇ ದ್ವಿಜ(ಬ್ರಾಹ್ಮಣ) ಎಂದು ಸೋಮನಾಥ ಹೇಳಿದ್ದಾನೆ.

ಅತಿ ಗಂಭೀರನುದಾರ ಧೀರನು ಮಹಾ ಸಂಪನ್ನ ಸತ್ಯಾತ್ಮನೂ |
ರ್ಜಿತ ನಾನಾಲಿಪಿಭಾಷೆಯೊಳ್ ಪರಿಚಿತಂ ಲಂಚಕ್ಕೆ ಕೈನೀಡದಂ ||
ವ್ರತ ಸದ್ಧರ್ಮ ವಿಚಾರಶಾಲಿ ಚತುರೋಪಾಯಂಗಳಂ ಬಲ್ಲವಂ |
ಪತಿಕಾರ‍್ಯಂ ವರ ಮಂತ್ರಿಯೈ ಹರಹರಾ ಶ್ರೀಚೆನ್ನಸೋಮೇಶ್ವರಾ || ೩ ||

ಭಾವಾರ್ಥ:- ಸೋಮನಾಥನು ಒಳ್ಳೆಯ ಮಂತ್ರಿಯಲ್ಲಿರ ಬೇಕಾದ ಗುಣಗಳನ್ನು ಈ ಪದ್ಯಭಾಗದಲ್ಲಿ ಪಟ್ಟಿಮಾಡಿದ್ದಾನೆ. ಅತಿ ಗಂಭೀರನೂ ಉದಾರನೂ ಧೀರನೂ ಮಹಾ ಸಂಪನ್ನನೂ, ಸತ್ಯಾತ್ಮನೂ, ರೂಧಿಯಲ್ಲಿರುವ ಹಲವು ಲಿಪಿ-ಭಾಷೆಗಳನ್ನು ಬಲ್ಲವನೂ ಲಂಚಕ್ಕೆ ಕೈ ಚಾಚದವನೂ ವ್ರತವನ್ನು ಪಾಲಿಸುವವನೂ ಧರ್ಮಪರನೂ ವಿಚಾರವಂತನೂ ಸಾಮ, ದಾನ, ಭೇದ, ದಂಡ ಎಂಬ ಚತುರೋಪಾಯಗಳನ್ನು ಬಲ್ಲವನೂ ಒಡೆಯನ ಕಾರ್ಯದಲ್ಲಿ ನಿಷ್ಠೆ ಇರುವವನೂ ಆಗಿರುವವನೇ ನಿಜವಾಗಿ ಒಳ್ಳೆಯ ಮಂತ್ರಿ ಎಂದು ಸೋಮನಾಥ ಹೇಳಿದ್ದಾನೆ.

ಉಡುರಾಜಂ ಕಳೆಗುಂದಿ ಪೆರ್ಚದಿಹನೇ ನೃಗ್ರೋಧಭೀಜಂ ಕೆಲಂ |
ಸಿಡಿದುಂ ಪೆರ್ಮರನಾಗದೇ ಎಳಗರುಂ ಎತ್ತಾಗದೇ ಲೋಕದೊಳ್ ||
ಮಿಡಿ ಪಣ್ಣಾಗದೆ ದೈವನೊಲ್ಮೆಯಿರಲಾ ಕಾಲಾನುಕಾಲಕ್ಕೆ ತಾಂ |
ಬಡವಂ ಬಲ್ಲಿದನಾಗನೇ ಹರಹರಾ ಶ್ರೀಚೆನ್ನಸೋಮೇಶ್ವರಾ || ೪ ||

ಭಾವಾರ್ಥ:- ಜೀವನದಲ್ಲಿ ಆಶಾವಾದಿಯಾಗಿರಬೇಕು. ಒಂದಲ್ಲಾ ಒಂದು ದಿನ ಒಳ್ಳೆಯದು ಆಗೇ ಆಗುತ್ತದೆ ಎಂಬುದನ್ನು ಇಲ್ಲಿ ಕವಿ ಪ್ರತಿಪಾದಿಸಿದ್ದಾನೆ.
    ಚಂದ್ರನು ಒಂದೇ ಸಮನಾಗಿರುವುದಿಲ್ಲ. ಕಳೆಗುಂದುತ್ತಾನೆ ಮತ್ತೆ ಹೆಚ್ಚಾಗುವುದಿಲ್ಲವೇ? ಆಲದ ಮರದ ಕೆಲವು ಬೀಜಗಳಾದರೂ ಸಿಡಿದು, ಭೂಮಿಯಲ್ಲಿ ಚಿಗುರಿ ಹೆಮ್ಮರವಾಗುವುದಿಲ್ಲವೇ? ಈ ಲೋಕದಲ್ಲಿ ಎಳೆಗರು ಬೆಳೆದು ಎತ್ತಾಗುವುದಿಲ್ಲವೇ? ಮಿಡಿ ಹಣ್ಣಾಗುವುದಿಲ್ಲವೇ? ದೇವರ ಕೃಪೆಯೊಂದಿದ್ದರೆ ಕಾಲಾಂತರದಲ್ಲಿ ಬಡವನು ಸಿರಿವಂತನಾಗುವುದಿಲ್ಲವೇ? ಎಂದು ಹೇಳುವ ಮೂಲಕ, ಜೀವನದಲ್ಲಿ ಯಾವುದೂ ನಿಶ್ಚಿತವಲ್ಲ. ಬದಲಾವಣೆ ಜಗದ ನಿಯಮ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾನೆ.
ಕೃಪೆ : ಕನ್ನಡ  ದೀವಿಗೆ

No comments:

Post a Comment

ಕನ್ನಡ SSLC SCORING PACKAGE

  ಕೇವಲ 35 ಪುಟದಲ್ಲಿ ಕನ್ನಡ SCORING PACKAGE 2022-23